Theatre

Our Creations

ಕೂಡಲಸಂಗಮ  

ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜರುಗಿದ ವಚನಕ್ರಾಂತಿ ಅಥವಾ ಶರಣ ಚಳವಳಿ ಭಾರತದಲ್ಲಷ್ಟೇ ಅಲ್ಲದೇ ಪ್ರಪಂಚದಲ್ಲಿಯೇ ಮೊಟ್ಟಮೊದಲ ಸಾಮಾಜಿಕ ಕ್ರಾಂತಿ. ಬಸವಣ್ಣ, ಅಲ್ಲಮರ ನೇತೃತ್ವದಲ್ಲಿ ನಡೆದ ಈ ಭಕ್ತಿ ಪಂಥದ ಸಮೂಹ, ಭಕ್ತಿಯನ್ನು ಮೀರಿ ಅನುಭಾವದ ನೆಲೆಯಲ್ಲಿ ಭಗವಂತನ್ನು ಸಾಕ್ಷಾತ್ಕರಿಸಿತು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜನರಾಡುವ ಮಾತುಗಳನ್ನೇ ಉಪಯೋಗಿಸಿ ವಚನಗಳ ರಚನೆಯನ್ನು ಪ್ರಾರಂಭಿಸಿತು. ಇವು ಆಡುನುಡಿಯಾಗಿ ಪ್ರಚಲಿತಗೊಂಡವು. ವೇದ, ಉಪನಿಷತ್ತುಗಳು ಪಂಡಿತರ ಆಸ್ತಿಗಳಾದರೆ, ವಚನಗಳು ಕಾಯಕ ಮಾಡುವ ಸಮೂಹದ ಬೆಳಕಾದವು. ಇವು ಕೇವಲ ಸಾಹಿತ್ಯವಾಗಿ ಉಳಿಯದೇ ಸಮಾಜ ಬೆಳಗುವ ದೀವಿಗೆಗಳಾದವು. ಇಂಥ ವಚನಗಳ ದಾರಿಗುಂಟ ನಡೆಯುತ್ತ ಯುವಜನಾಂಗವನ್ನು ಒಂದು ಆದರ್ಶ ಮೌಲ್ಯದೆಡೆಗೆ ಹೊರಳುವಂತೆ ಮಾಡುವುದೇ ಈ ಕೂಡಲಸಂಗಮ ದೃಶ್ಯರೂಪಕದ ಉದ್ದೇಶ. ಇಂಥ ಒಂದು ದೊಡ್ಡ ದೀವಿಗೆಯ, ಬೆಳಕಿನ ಪರಂಪರೆಯನ್ನು ಮತ್ತೆ ಹಿಡಿದಿಡುವ ಸಣ್ಣ ಪ್ರಯತ್ನವೇ ವಚನಗಾಯನ ನೃತ್ಯರೂಪಕ. ಬಸವಣ್ಣನವರ ತತ್ವ, ಆದರ್ಶಗಳನ್ನು ನೆನಪಿಸಿಕೊಳ್ಳುವ ಅನುಸಂಧಾನ. ಆಡುನುಡಿಯ ವಚನಗಳಿಗೆ, ಜನರ ಪದಗಳಾದ ಜನಪದ ಧಾಟಿಯ ಸಂಗೀತವಿದೆ. ಇದು ಹೊಸಪ್ರಯೋಗ. ಇಡೀ ಭಾರತದ ಎಲ್ಲ ರೀತಿಯ ಜಾನಪದ ಶೈಲಿಗಳನ್ನು ಬಳಸಿ, ಈ ನಾಡಿನ ಶ್ರೇಷ್ಠ ಸಂಗೀತ ನಿರ್ದೇಶಕರಾದ ಸಿ. ಅಶ್ವಥ್ ರವರು ಈ ವಚನಗಳಿಗೆ ಹೊಸಲಯ, ಹೊಸ ಜೀವ ತುಂಬಿದ್ದಾರೆ. ಈ ವಚನಗಳನ್ನು ದೃಶ್ಯರೂಪಕ್ಕೆ ತರಲು ಸುಗುಣ ಹಾಗೂ ಪ್ರಸಾದ್ ಕುಂದೂರು ಶ್ರಮಿಸಿದ್ದಾರೆ. ಇದು ಒಂದು ರೀತಿಯಲ್ಲಿ ವಚನಗಳನ್ನು ಹಾಗೂ ಆ ಪರಂಪರೆಯನ್ನು ಇಡೀ ನಾಡಿನ ಮೂಲೆಮೂಲೆಗೆ ತಲುಪಿಸುವ ಪ್ರಯತ್ನ. ಬಸವಣ್ಣನ ಭಕ್ತಿಪಥಕ್ಕೆ ಜಾನಪದದ ಕಂದೀಲು ನೀಡುವ ಈ ಕಾರ್ಯಕ್ರಮಕ್ಕೆ ಸಾಮಾಜಿಕ ಆಶಯಗಳೇ ಬೆನ್ನೆಲುಬು.

Koodalasangama 

Vachana Kranthi of 12th century was probably the first ever revolution that occurred not only in Karnataka but throughout the world. The pioneers of this movement, Basavanna and Allamaprabhu led many of their followers to the path of enlightenment through their vachanas. Koodala Sangama is a play based on those vachanas. It is an attempt to explore that path of enlightenment in the contemporary world.
This is an experiment of adapting vachanas to Indian folk forms accompanied by the music composed by Dr. C. Ashwath.

M.M.Suguna and Prasad Kundoor have worked together to bring them to stage in the form of a dance drama.

More details

 

ಕುರಿ  

"ಕುರಿ ಅಥವಾ ಗಾಂಧೀಜಿಯ ಕುರಿ ನಾಟಕವು ಅನೇಕ ಮಜಲುಗಳಲ್ಲಿ ನಮ್ಮ ನಡುವೆ ನಡೆದು ಹೋದ ಆಳುವವರ ಪಾಷಂಡಿತನವನ್ನು ಕುರಿಯ ಮೂಲಕ ಹೇಳುತ್ತಾ ಹೋಗುವುದು. ಇಲ್ಲಿ ಕುರಿ ಕೇವಲ ಕುರಿಯಲ್ಲ ಇದು ಗಾಂಧೀಜಿಯ ಕುರಿ. ಏಕೆಂದರೆ ನಮ್ಮ ದೇಶದಲ್ಲಿ ಗಾಂಧಿಜಿಯನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದು ಜನರು ಗಾಂಧಿಯ ಆದರ್ಶವನ್ನು ಬಳಸಿಕೊಂಡು ಅಧಿಕಾರವನ್ನು ಅನುಭವಿಸುತ್ತಾ ಗಾಂಧಿಯ ಆಶಯಗಳನ್ನು ಹೇಗೆ ಕೊಂದರು, ಈಗಲೂ ಕೊಲ್ಲುತ್ತಿದ್ದಾರೆ ಎಂಬುದನ್ನು ವಿಡಂಬನಾತ್ಮಕವಾಗಿ ರಂಗದ ಮೇಲೆ ತರುವ ಪ್ರಯತ್ನ ಇದಾಗಿದೆ. ೭೦ರ ದಶಕದ ನಂತರ ಮಾಡಿದ್ದ ಭರವಸೆ ಹೇಗೆ ಮಣ್ಣ ಪಾಲಾಯಿತು ಹಾಗೂ ಇತ್ತೀಚಿನ ದಿನಗಳಲ್ಲಿ ಗಾಂಧಿಯನ್ನು ಕೇವಲ ಸ್ವಚ್ಛತೆಗೆ ಮೀಸಲಾಗಿಸಿ ಅವನ ದೊಡ್ಡ ರೂಪಕಗಳನ್ನು ಹಾಳುಮಾಡುತ್ತಿರುವುದನ್ನು ಈ ನಾಟಕ ಹೇಳುತ್ತದೆ. ಇದು ನಿರಂತರದ ಹೊಸ ಪ್ರಯೋಗ. ಹಿಂದಿ ಮೂಲ ಸರ್ವೇಶ್ವರ ದಯಾಲ ಸಕ್ಸೇನಾ, ಸಂಗೀತ ದೇವಾನಂದವರಪ್ರಸಾದ್, ಕನ್ನಡಕ್ಕೆ ಸಿ ಪಿ ರವಿಕುಮಾರ್, ನಿರ್ದೇಶನ ರಿಯಾಜ್ ಸಿಹಿಮೊಗೆ ಮತ್ತು ಸೋಮಶೇಖರ್.

More Details

ನೋ ಮ್ಯಾನ್ಸ್ ಲ್ಯಾಂಡ್ | No Man's Land  

"ಮನುಷ್ಯ ತನ್ನ ಜೀವನಪರ್ಯಂತ ಏನನ್ನಾದರೂ ಹುಡುಕುತ್ತಿರುತ್ತಾನೆ. ಹುಡುಕಾಟದ ಪ್ರಕ್ರಿಯೆ ನಿರಂತರ, ಹಾಗೇ ನಾವೂ ಕೂಡ ಹಲವಾರು ವರ್ಷಗಳಿಂದ ಹುಡುಕುತ್ತಿದ್ದೇವೆ. ವ್ಯಷ್ಠಿಯ ಬದಲಿಗೆ ಸಮಷ್ಠಿಯಾಗಿ. ನಮ್ಮ ಹುಡುಕಾಟದಲ್ಲಿ ಇತರರನ್ನು ಸೇರಿಸಿಕೊಳ್ಳುವ ಹಾಗೂ ಹುಡುಕಾಟ ನಡೆಸುವ ಮಾದ್ಯಮವಾಗಿ ರಂಗಭೂಮಿಯನ್ನ ಆಯ್ದುಕೊಂಡಿದ್ದೇವೆ. ನಾವು ನಾಟಕ ಆಡುವವರಾದರೂ, ನಮ್ಮ ಕನಸು ಇರುವುದು ನೆಲಮೂಲದ, ಅಕ್ಕರೆಯ ನಿಜರೂಪವನ್ನು ಹುಡುಕುವ ಕನಸು. ಈ ನಾಟಕದಲ್ಲೂ ಸಹ ನಮ್ಮ ಪ್ರತೀಕವಾದ ಗುಂಪೊಂದು ಯಾವುದೇ ಪ್ರತಿಬಂಧನೆ ಇಲ್ಲದ, ಗಡಿಗಳಿಲ್ಲದ, ಯಾರಿಗೂ ಸೇರಿರದ ಹಾಗೂ ಎಲ್ಲರಿಗೂ ಸೇರಿರುವ ಒಂದು ಪ್ರದೇಶವನ್ನು ಹುಡುಕುತ್ತಾ ಹೊರಟಿದೆ. ಅಂಗಾಂಗಗಳು ಸೆಟೆದುಕೊಂಡರೆ ದೇಹ ಜಡವಾಗುತ್ತದೆ. ಮನಸ್ಸುಗಳು ಸೆಟೆದುಕೊಂಡರೆ ಸಮಾಜ ಜಡವಾಗುತ್ತದೆ. ಈ ಸೆಟೆತದ ಜಡತ್ವವ ಪರಿಹರಿಸುವ ಜೀವಗಳ ಪ್ರತೀಕವಾಗಿ, ಪ್ರೀತಿಗಾಗಿ ಹಂಬಲಿಸುತ್ತ ಹೊರಡುವ ಗುಂಪಿಗೆ ಎದುರಾಗುವ, ಇಂದು ಅಸಹಜವೆನಿಸಿರುವ ಸಂಗತಿಗಳನ್ನು ಈ ನಾಟಕದಲ್ಲಿ ಪ್ರಸ್ತುತಪಡಿಸಲಾಗಿದೆ. ಇದನ್ನು ಈ ಬಾರಿಯ ಸಹಜರಂಗದ ನಾಟಕದ ವಸ್ತುವೆಂದುಕೊಂಡರೂ ಸರಿಯೇ ಅಥವಾ ನಮ್ಮಂತೆಯೇ ಹುಡುಕುವ ಜೀವಗಳ ಆಶಯ ಮತ್ತು ಕನಸೆಂದುಕೊಂಡರೂ ಸರಿಯೇ. ಹುಡುಕುವ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳನ್ನು ಸೇರಿಸುವ ಪ್ರಕ್ರಿಯೆಯೇ ಈ ನಾಟಕ.

More Details

ರಸ್ತೆ ನಕ್ಷತ್ರ  

"ರಸ್ತೆ ನಕ್ಷತ್ರ" ಕನ್ನಡದ ಪ್ರಶಸ್ತಿ ವಿಜೇತ ಖ್ಯಾತ ಲೇಖಕ ಟಿ.ಕೆ.ದಯಾನಂದ್ ಅವರ ಕಥಾನಕಗಳ ಸಂಗ್ರಹ. ಯಾವ ದಾಖಲೆಗೂ ಸಿಗದೆ, ರಸ್ತೆ ಬದಿ, ಬೀದಿ ಬದಿಗಳಲ್ಲಿ ಬದುಕು ಸವೆಸುತ್ತಿರುವವರ ಜೀವನದ ಬಿಡಿ ಬಿಡಿ ದಾಖಲೆಗಳ ಸಂಗ್ರಹವಾಗಿರುವ "ರಸ್ತೆ ನಕ್ಷತ್ರ" ಬೆಚ್ಚಿ ಬೀಳಿಸುವ ಆರ್ದ್ರ ಕಥಾನಕಗಳನ್ನು ಒಳಗೊಂಡಿದೆ.

ಚಪ್ಪಲಿ ಹೊಲೆಯುವವರು, ಸೈಕಲ್‌ಶಾಪ್ ನಡೆಸುವವರು, ಚಿಂದಿ ಆಯುವವರು, ಮನೆಗೆಲಸ ಮಾಡುವವರು, ಚರಂಡಿ ತೊಳೆಯುವವರು, ರಿಕ್ಷಾ ಓಡಿಸುವವರು ಹೀಗೆ ಬದುಕಿನ ಮೂಲೆ ಮುಡುಕುಗಳಲ್ಲಿ, ಚರಿತ್ರೆಯೇ ಇಲ್ಲದಂತೆ ಕತ್ತಲೆಯಲ್ಲಿ ಬದುಕುತ್ತಿರುವ ಜೀವಗಳು ಇಲ್ಲಿ ತಾವೇ ಮಾತನಾಡುತ್ತವೆ, ತಮ್ಮ ನೋವನ್ನು ಹೇಳಿಕೊಳ್ಳುತ್ತವೆ. ನಗರಗಳ ಓಟದ ಬಂಡಿಯ ಕೆಳಗೆ ಸಿಕ್ಕು ಚೂರಾದ ಬದುಕನ್ನು ಮತ್ತೆ ಮತ್ತೆ ಕೂಡಿಸಿಕೊಳ್ಳುತ್ತ, ಬದುಕು ಛಿದ್ರವಾಗದಂತೆ ಕಷ್ಟಪಟ್ಟು ಜೀವನ ಸಾಗಿಸಲು ನಿಟ್ಟುಸಿರು ಬಿಡುತ್ತ ಹರ ಸಾಹಸ ಪಡುತ್ತಿರುವ ಈ ಜೀವಗಳನ್ನು ರಸ್ತೆ ನಕ್ಷತ್ರಗಳೆಂದು ಸಂಬೋಧಿಸಿ, ಅವರ ಬದುಕನ್ನು ಇಡಿಯಾಗಿ ಅನಾವರಣಗೊಳಿಸುವ ಇಲ್ಲಿನ ಕಥಾನಕಗಳ ನಾಯಕರು, ಗ್ರೀಕ್ ರುದ್ರ ನಾಟಕದ ದುರಂತ ನಾಯಕರಿಗೇನೂ ಕಡಿಮೆಯಿಲ್ಲ. ಸದಾ ಸೆಣೆಸುವ, ಹೋರಾಡುವ ಛಲ ಇವರನ್ನು ಅತ್ಯಂತ ನಾಟಕೀಯ ಸ್ತರದಲ್ಲಿ ನಮ್ಮೆದುರು ತೆರೆದಿಡುತ್ತದೆ.

ಈ ರಸ್ತೆ ಬದಿಯ ನಕ್ಷತ್ರಗಳೇ ನಮ್ಮ ನಾಟಕದ ನಾಯಕರು. ಇವರ ಬೆಚ್ಚಿ ಬೀಳಿಸುವ ಕಥಾನಕವೇ ನಾಟಕದ ವಸ್ತು. ಹೊಸದಾದ ನಿರೂಪಣೆಯಿಂದ, ನಾಟಕೀಯ ವಸ್ತುವಿನಿಂದ ಕನ್ನಡ ನಾಟಕ ಪರಂಪರೆಗೆ ಈ ನಾಟಕ ವಿಭಿನ್ನ ಸೇರ್ಪಡೆಯಾಗಲಿದೆ.

Rasthe Nakshathra is a new small Stories book by noted young writer Mr. T. K. Dayananda. More than twenty real life narratives from the book 'Road Star' throw light on edges and the dark corners of life in the city of illusion called Bangalore and introduce them heartrendingly. This is not the underworld. It is the life of hundreds of people we come across the city whenever we visit it. We usually don't get a chance to know the people behind the mask and costume. Driving auto, repairing footwear, selling groundnuts, sharpening the knife, collecting garbage, waiting in make up to sell bodies, telling fortune, begging, are the ways of survival of hundreds of such people.

The giant wheel of life of the city of illusion keeps rolling. In the midst of its luxury, convenience, advantage-disadvantage, the sound of this kind of living, earning, sighing, gets drowned in the great noise of the city. The strangers who come and go or the residents of apartments replete with all necessities don't have leisure to worry about these kind of people.

In the ever widening design of modern life, it is not just individuals who get pushed to the periphery. Many communities have got crushed under the wheels of the juggernaut called 'development' and losing their livelihood they have become destitute. In this outrageous activity, nowhere do these sacrifices get mentioned in any surveys of progress made. To see them, eyes free of spectacles are needed. And a heart that is not high with the slogan of 'development' is needed.

More Details

ರಾಜ ನಗಾರಿ | Raja Nagaari  

ರಾಜನಗಾರಿ ನಾಟಕ ಆಪ್ತ ರಂಗಭೂಮಿಯ ಸ್ವರೂಪದಲ್ಲಿ ಸಿದ್ಧವಾಗಿರುವ ನಾಟಕ. ಈ ನಾಟಕ ಸಾಂಸ್ಕೃತಿಕ ಪ್ರಶ್ನೆಗಳನ್ನು ಎತ್ತುತ್ತಲೇ ಭಾರತೀಯ ಸಮಾಜದ ಬಹುತ್ವವನ್ನು ಎತ್ತಿ ಹಿಡಿಯುತ್ತದೆ. ಯಾವುದೇ ಪ್ರಭುತ್ವದ ದಮನಕಾರಿ ಪ್ರವೃತ್ತಿಯನ್ನು ಸಾಂಸ್ಕೃತಿಕವಾಗಿ ಖಂಡಿಸುತ್ತಾ ಎಲ್ಲರನ್ನೂ ಒಳಗೊಳ್ಳುವ ಬಹುತ್ವವನ್ನು ಪ್ರತಿಪಾದಿಸುತ್ತದೆ. ಯಾವುದೇ ಸಮಾಜದಲ್ಲಿ ಮನುಷ್ಯ ಮನುಷ್ಯರ ನಡುವಿನ ಪ್ರೀತಿ, ಸಹನೆ, ಕರುಣೆ, ಅನುಕಂಪಗಳು ಆಘಾತಕ್ಕೆ ಹಾಗೂ ದಮನಕ್ಕೆ ಒಳಗಾದಾಗ ಉಂಟಾಗುವ ಅರಾಜಕ ಪರಿಸ್ಥಿತಿಯನ್ನು ನಾಟಕದಲ್ಲಿ ತೆರೆದಿಡಲಾಗಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ನಿರಂಕುಶಾಧಿಕಾರವು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿ ಕೊಳ್ಳುವಾಗ ನಡೆಯುವ ದುರಂತಗಳನ್ನ ನಾಟಕವು ಸಮರ್ಥವಾಗಿ ತೆರೆದಿಡುತ್ತದೆ. ಜನರ ನ್ಯಾಯಯುತ ಹೋರಾಟಗಳನ್ನು ಹತ್ತಿಕ್ಕುವ ಅಥವಾ ಅವರನ್ನು ಅದರಿಂದ ದೂರಮಾಡುವ ವ್ಯವಸ್ಥೆಯ ಪಿತೂರಿಗಳ ವಿರುದ್ಧ ಈ ನಾಟಕದಲ್ಲಿ ಪ್ರಶ್ನೆಗಳನ್ನು ಎತ್ತಲಾಗಿದೆ. ಎಲ್ಲ ರೀತಿಯ ಮತ್ತು ಎಲ್ಲಾ ಧರ್ಮದ ಮೂಲಭೂತವಾದಿತನವನ್ನು ವಿರೋಧಿಸುತ್ತಾ ಬಹುತ್ವದ ಆಶಯದೆಡೆಗೆ ಈ ನಾಟಕ ಮುಖ ಮಾಡುತ್ತದೆ. ಸಮಾನತೆ, ಸಹನೆ, ಸಹಬಾಳ್ವೆ, ಸರ್ವೋದಯ, ಮುಂತಾದ ಮಾನವೀಯ ಮೌಲ್ಯಗಳನ್ನು ಅಸಾಂಸ್ಕೃತಿಕ ಬಿಕ್ಕಟ್ಟು ಗಳಿಂದ ದೂರಮಾಡುವುದು ಹಾಗೂ ಬಿಡಿಸಿಕೊಳ್ಳುವಂತೆ ಮಾಡು ವುದು ಈ ನಾಟಕದ ಪ್ರಸ್ತುತಿಯ ಹಿಂದಿನ ಮೌಲ್ಯವಾಗಿದೆ.

More Details

 

ಸ್ತ್ರೀ ಭಾರತಂ  

ಶತಮಾನಗಳಿಂದ ಜಾತಿಯನ್ನು ಮೀರಿ ಸತತವಾಗಿ ಎ ರೀತಿಯ ಶೋಷಣೆಗಳಿಂದ ಸುತ್ತುವರೆದು, ಇಂದಿಗೂ ಕೂಡ ಕಡೆಗಣಿಸಲ್ಪಟ್ಟ ಸಮುದಾಯವೆಂದೇ ಗುರುತಿಸಿಕೊಳ್ಳುತ್ತಾ ಬಂದಿರುವ ಮಹಿಳೆಯ ಸ್ಥಿತಿಗತಿಗಳ, ಅಭಿವ್ಯಕ್ತಿಯ ಕುರಿತ ನಮ್ಮ ರಂಗ ತಂಡದ ಹೊಸ ನಾಟಕವೇ ಸ್ತ್ರೀ ಭಾರತಂ. ಸದಾ ಹಿಂದೆಯೇ ಇದ್ದು ತನ್ನ ಸಹಜ ಅಭಿವ್ಯಕ್ತಿಗಳನ್ನು ಮುಚ್ಚಿಕೊಂಡು ಸಮಾಜದ ಅಭಿವ್ಯಕ್ತಿಯ ಜೊತೆಗೆ ಸೇರಿ ಹೋಗಿರುವ ಈಕೆಯ ಅಭಿವ್ಯಕ್ತಿಗಳನ್ನು ಸಂವೇದನೆಗಳನ್ನು ರಂಗದ ಮೇಲೆ ತರುವ ಪ್ರಯತ್ನ ನಮ್ಮದು ಪುರುಷನಿಗಿಂತ ಹೆಚ್ಚು ದುಡಿಯುವ ಪೊರೆಯುವ ಶಕ್ತಿ, ಸಹನೆ, ಮಹಿಳೆಗಿದೆ ಅದಕ್ಕಾಗಿಯೇ ಈಕೆ ಸದಾ ದುಡಿಯುವ ಸರಕಾಗಿ ಶೋಷಣೆಗೆ, ಅನ್ಯಾಯಕ್ಕೆ ಒಳಗಾಗುತ್ತಲೇ ಇದ್ದಾಳೆ. ಹಿಂದಿಗಿಂತಲೂ ಇಂದು ಅವಳ ಶೋಷಣೆ ಬೇರೆ ಬೇರೆ ರೂಪದಲ್ಲಿ, ಸ್ತರಗಳಲ್ಲಿ ವಿಭಿನ್ನ ನೆಲೆಗಳಲ್ಲಿ ನಡೆಯುತ್ತಲೇ ಇದೆ.ಇದರ ವಿರುದ್ಧದ ದನಿಯಾಗಿ ಇನ್ನೂ ಮೊಳೆತಿರದ ಈ ಮಹಿಳೆಯರ ಭಾವಾಭಿವ್ಯಕ್ತಿ ಬಿಡಿ ಬಿಡಿಯಾಗಿ ಕಾಣುತ್ತಾ ಸೊರಗಿದೆ. ಹೊಸ ಚಿಂತನೆಗಳು ಜಗತ್ತನ್ನು ಪ್ರಭಾವಿಸುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರ ಮೇಲಿನ ವಿಕೃತ ಕ್ರೌರ್ಯ ಹೆಚ್ಚಾಗುತ್ತಲೇ ಇರುವುದು ನಮ್ಮ ದುರಂತ ಹಾಗೂ ಸಂದರ್ಭದ ವ್ಯಂಗ್ಯವಾಗಿದೆ. ಈ ಸಾಮಾಜಿಕ ಸಂದರ್ಭದಲ್ಲಿ ಪುರುಷ ತನ್ನೊಳಗೆ ಸದಾ ಜಾಗೃತವಾಗಿ ಕಾಪಾಡಿಕೊಂಡಿರಬೇಕಾಗಿದ್ದ ಹೆಣ್ಣನ್ನು ಮರೆಯುತ್ತಿದ್ದಾನೆ ಇದು ವಿಕೃತ ಸಮಾಜವೊಂದರ ನಿರ್ಮಾಣಕ್ಕೆ ಕಾರಣವಾಗುತ್ತಿದೆ.ಜಾಗತಿಕ ಒತ್ತಡದಲ್ಲಿ ನಲುಗುತ್ತಿರುವ ಭಾರತದಲ್ಲಿ ಮಹಿಳಾಪರ ಸಂವೇದನೆಗಳು ಅಸೂಕ್ಷ್ಮ ಅಭಿವ್ಯಕ್ತಿಗಳಲ್ಲಿ ಮುಗಿದುಹೋಗುತ್ತಿವೆ. ಇವೆಲ್ಲದರ ನಡುವೆ ಅನುಕಂಪ, ಕರುಣೆ, ಸಹನೆ, ಪ್ರೀತಿಗಳಿಂದ ಮುಪ್ಪುರಿಗೊಳ್ಳಬೇಕಾಗಿದ್ದ ಹೆಣ್ಣಿನ ಪ್ರತಿಮೆ ಮುಕ್ಕಾಗತೊಡಗಿದೆ. ಈ ಬಾರಿಯ ನಮ್ಮ ನಾಟಕ ಈ ವಿಷಯದ ಸುತ್ತಲೇ ರೂಪುಗೊಂಡಿದೆ. ಇದು ನಿರಂತರದ ಹೊಸ ಪ್ರಯೋಗ.

Sthree Bharatam 

For centuries, there is a community, a basic unit of the society that has been interminably oppressed, abused and ignored. A community above caste – called ‘WOMEN’ Inequalities between men and women and discrimination against women have been age-old issue all over the world. A woman who has always stood in the side-lines masking her identity and remained inside four walls has greater potential and patience. Although the outlook of the world is changing, the forms of oppression/ abuse against women are becoming sophisticated. However, there have been a few voices raised against inequality; there is a need for new thought process, an encouragement for it“Sthree Bharatham” is such an attempt at portraying these potential and expressions of women and sensitizing the society towards the same.

More details

 

ಕಾಲಯಾತ್ರೆ

ಮಹಾಕಾಲನ ರಥವನ್ನು ಕಾಲವೆಸಿ ಈ ರಥದ ಮಿಣಿಯನ್ನು ಎಳೆಯುವವರೇ ಜಗತ್ತನ್ನು ನಡೆಸುವವರಾಗಿರುತ್ತಾರೆ. ಈ ಕಾಲವನ್ನು ಯಾರೊಬ್ಬರೂ, ಯಾವ ಸಮುದಾಯವೂ ಒಬ್ಬಂಟಿಯಾಗಿ ನಡೆಸಲಾರರು, ಕಾಲವು ನಿರ್ಲಿಪ್ತ ಹಾಗೂ ಯಾರಿಗೂಒತ್ತು ಕೊಡುವಂತಹದ್ದಲ್ಲ. ಇಲ್ಲಿ ಒಬ್ಬರು ಅಥವಾ ಯಾವುದೇ ಒಂದು ಸಮುದಾಯವೂ ಪಾಲ್ಗೊಳ್ಳದಿದ್ದರೆ ಜಗತ್ ಸಂಸಾರ ನಡೆಸುವುದೇ ಕಷ್ಟವಾಗುತ್ತದೆ. ಹಾಗಾಗಿ ಯಾರೊಬ್ಬರೂ ಈ ರಥ ತಮ್ಮದೆಂದು ಹೊರಟರೂ ರಥ ಸ್ಥಬ್ದವಾಗುತ್ತದೆ ಎಂಬುದನ್ನು ಕಾಲಯಾತ್ರೆ ಮನೋಜ್ಞವಾಗಿ ತಿಳಿಸುತ್ತದೆ. ಕಾಲಯಾತ್ರೆ ನಾಟಕದ ಕರ್ತೃ ಶ್ರೀ ರವೀಂದ್ರನಾಥ ಟಾಗೋರರು. ಇದನ್ನು ಕನ್ನಡಕ್ಕೆ ಚನ್ನಕೇಶವ ಹಾಗೂ ಮೀರಾ ಚಕ್ರವರ್ತಿಯವರು ಅನುವಾದಿಸಿದ್ದಾರೆ. ಪ್ರಸ್ತುತ ಪ್ರಯೋಗಕ್ಕೆ ಕಾಲಯಾತ್ರೆಯ ಮರುಕಥನದೊಂದಿಗೆ ಕವಿಗಳಾದ ಶ್ರೀ ಗೋಪಾಲಕೃಷ್ಣ ಅಡಿಗ, ಸಿದ್ದಲಿಂಗಯ್ಯ, ಪು.ತಿ.ನರಸಿಂಹಾಚಾರ್, ಎಲ್.ಗುಂಡಪ್ಪ ಹಾಗೂ ಪಂಜೆ ಮಂಗೇಶರಾಯರ ಕವಿತೆಗಳನ್ನು ಧನ್ಯತಾ ಪೂರ್ವಕವಾಗಿ ಅಳವಡಿಸಿಕೊಂಡಿದ್ದೇವೆ.

Kaalayaathre

In this play, Mahakaala’s chariot plays the role of time. The one who can move the chariot are those who can guide the world. But such a time cannot be run by any single man or community as time is impartial and indifferent.

The play at last concludes that no single person or community can move the chariot but together can. This serves as a metaphor for the need to become united to bring some peace and harmony in today’s world.

It is a lesser known play by Sri Rabindranath Tagore. The play has been translated to Kannada by Channakeshava and Meera Chakraborti.  

More details

ಬರ ಅಂದರೆ ಎಲ್ಲರಿಗೂ ಇಷ್ಟ

ಈ ನಾಟಕ ರೂಪಿಸುವಾಗ ನಾವು ಯೋಚಿಸಿದ್ದು ಈವತ್ತಿನ ಶಿಕ್ಷಣ ವ್ಯವಸ್ಥೆಯ ಕುರಿತು ಸಾಧ್ಯವಾದಷ್ಟು ಚರ್ಚೆಗಳನ್ನು ಹುಟ್ಟುಹಾಕಬಹುದೇ? ಎಂದು. ನಾಟಕ ಕಲಿಕೆ ಪ್ರಕ್ರಿಯೆ ನಡೆಯುತ್ತ ಹೋದಂತೆ ಅದು ವಿಸ್ತಾರಗೊಳ್ಳುತ್ತ ಹೋಗಿ ಇಡೀ ವ್ಯವಸ್ಥೆಯ ಕನ್ನಡಿಯಾಗಿ ಶಿಕ್ಷಣವನ್ನು ನೋಡುವ ಸಂದರ್ಭ ಬಂದಿತು. ಅದರ ಫಲವೇ ಪಿ. ಸಾಯಿನಾಥರವರ 'ಬರ ಅಂದ್ರೆ ಎಲ್ರಿಗೂ ಇಷ್ಟ' ಪುಸ್ತಕ ಆಧಾರಿತ ಕಿರುಪ್ರದರ್ಶನಗಳು. ಇವತ್ತು ಶಿಕ್ಷಣ ಪಡೆದವರು ಶಿಕ್ಷಣ ಪಡೆಯದವರ ಪ್ರತಿನಿಧಿಗಳಂತೆ ವರ್ತಿಸುತ್ತ ಈ ದೇಶದ ಬಹುಸಂಖ್ಯಾತ ಜನಸಂಖ್ಯೆಯಾಗಿರುವ ಆಶಿಕ್ಷಿತ, ಅಸಂಘಟಿತ ಸಮುದಾಯಗಳ ಪಾಲನ್ನು ತಾವೇ ನುಂಗುತ್ತಿದ್ದಾರೆ. ಈ ನುಂಗುವ, ಆಕ್ರಮಣಶೀಲ ವರ್ತನೆಯನ್ನು ಕಲಿಸುವಂತಹದ್ದು ಅದು ಎಂತಹ ಶಿಕ್ಷಣವಾಗಿರಬಹುದು? ಶಿಕ್ಷಣ ಪಡೆದ ಇಂತಹ ಪ್ರತಿನಿಧಿಗಳು ಈ ದೇಶವನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿರುವ ಪರಿ ಒಂದು ದೊಡ್ಡ ವಿಪರ್‍ಯಾಸದಂತೆ ಕಾಣುತ್ತಿದೆ. ಈ ದೇಶದ ಚರಿತ್ರೆಯಲ್ಲಿ ದಾಖಲೆ ಆಗದ ಲಕ್ಷಾಂತರ ಕೋಟ್ಯಾಂತರ ಜನರ ಬದುಕಿನ ಮೇಲೆ ಈ ಶಿಕ್ಷಿತರಿರುವ ವ್ಯವಸ್ಥೆ ನಡೆಸುತ್ತಿರುವ ದಬ್ಬಾಳಿಕೆ, ಮೋಸ, ಹಗಲುಗಳ್ಳತನ, ವಂಚನೆ ಯಾವುದೇ ನಾಗರಿಕ ಸಮಾಜ ತಲೆತಗ್ಗಿಸುವಂತಹದು. ಒಂದು ತುಂಡು ಭೂಮಿಗಾಗಿ, ಮಾನವಂತ ಬದುಕಿಗಾಗಿ, ಜೀವನವಿಡೀ ಹಂಬಲಿಸಿ ಸೋತುಹೋದ, ಈಗಲೂ ಅದಕ್ಕಾಗಿ ಕಾಯುತ್ತಲೇ ಇರುವ ಕೋಟ್ಯಂತರ ಕುಟುಂಬಗಳ ಅನ್ನದ ಹಕ್ಕನ್ನು ಕಿತ್ತುಕೊಂಡಿರುವ ಈ 'ಸುಶಿಕ್ಷಿತ' ಸಮುದಾಯ ಅರ್ಥವಿಲ್ಲದ ಯೋಜನೆಗಳನ್ನು ಅಭಿವೃದ್ದಿ ಹೆಸರಿನಲ್ಲಿ ಹೇರುತ್ತಲೇ ಬಂದಿದೆ. ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಅಭಿವೃದ್ದಿ ಹೆಸರಿನಲ್ಲಿ ನಡೆಯುತ್ತಿರುವ ಅನರ್ಥಗಳಿಗೆ ಬಲಿಯಾಗುತ್ತಿರುವವರು ಈ ಅಶಿಕ್ಷಿತ, ಅಸಂಘಟಿತ ಜನಸಮುದಾಯಗಳು. ಮನುಷ್ಯ ಪ್ರೀತಿಯ ಹಂಬಲಕ್ಕಾಗಿ ಎದುರು ನೋಡುತ್ತಿರುವ ಇಂತಹವರನ್ನು ಒಳಗೊಳ್ಳದ ಯಾವ 'ಅಭಿವೃದ್ಧಿ'ಯನ್ನು ನಮ್ಮ ಈ ಸುಶಿಕ್ಷಿತ ಸಮುದಾಯ ರೂಪಿಸುತ್ತಿದೆ? ಎಂಬುದು ಅತ್ಯಂತ ಸೋಜಿಗ. ಅಭಿವೃದ್ದಿ ಎನ್ನುವ ಈ ಶತಮಾನದ ದೊಡ್ಡ 'ವ್ಯಂಗ್ಯ'ವನ್ನು ರೂಪಿಸುತ್ತಿರುವವರು ಅದರಿಂದ ಫಲ ಪಡೆಯುತ್ತಿರುವವರು ಇಬ್ಬರೂ ಒಬ್ಬರೇ ಆಗಿದ್ದಾರೆ. ಈ ದುರಂತ ದಿನನಿತ್ಯ ಘಟಿಸುತ್ತಲೇ ಇದೆ. ಈ ರೀತಿಯ 'ಸುಶಿಕ್ಷಿತ', 'ಸುಸಂಸ್ಕೃತ' 'ವಿದ್ಯಾವಂತ' ನಾಗರೀಕರನ್ನು ಸೃಷ್ಟಿಸುತ್ತಿರುವ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಮತ್ತು ಇವೆಲ್ಲವನ್ನು ಒಳಗೊಂಡು ಒಂದು ಬಹುದೊಡ್ಡ ಪ್ರಜಾತಂತ್ರ ವ್ಯವಸ್ಥೆ ಇವೆಲ್ಲವೂ ಆತ್ಮರಹಿತ ಶಿಕ್ಷಣ ವ್ಯವಸ್ಥೆಯ ಪಾಪಿಕೂಸುಗಳಂತೆ ಕಾಣುತ್ತಿವೆ. ಒಂದೆಡೆಗೆ ಒಳ್ಳೆಯವರಾದ ಮುಗ್ದರಾದ, ಸದಾ ಮೂಲೆಗೆ ತಳ್ಳಲ್ಪಡುತ್ತಿರುವ ಅಶಿಕ್ಷಿತ, ದಾಖಲೇ ಆಗದ ಅಸಂಘಟಿತ ಜನ ಸಮುದಾಯವಾದರೆ, ಇನ್ನೊಂದೆಡೆ ಇವರನ್ನು ಸುಲಿದು, ಇವರ ಹೆಸರಿನಲ್ಲೇ ಅವರ ಪಾಲನ್ನು ನುಂಗಿ ನೊಣೆಯುತ್ತಿರುವ 'ಸುಶಿಕ್ಷಿತ' ಜನಸಮುದಾಯ. ಈ ಎರಡು ವೈಪರೀತ್ಯಗಳನ್ನು ಕುರಿತು ಪ್ರದರ್ಶನಗಳನ್ನು ರೂಪಿಸಿದ್ದೇವೆ. ದಾಖಲೇ ಆಗದ ಜನಸಮುದಾಯಗಳಿಗೆ ಈ ಪ್ರದರ್ಶನಗಳನ್ನು ಅರ್ಪಿಸುತ್ತೇವೆ.

Bara Andre Yellarigu Ishta

This play is based on P.Sainath’s book, Everybody Loves a Good Drought. The initial idea while constructing this play was to initiate a discussion about today’s education system. While in the process of becoming a play, it paved ways into understanding education as the mirror of the entire system. Today’s world has been divided into two important classes: those of literates and the other. These literates are exploiting the other by projecting themselves as the representatives of the later. This is a mockery at the entire nation. This continual exploitation has been there in the human history since time immemorial. This play aims at depicting the lives and struggles of those communities who have been exploited by so called literates, intellectuals and the entire system as a whole.  

More details

Shivarathri

ಶಿವರಾತ್ರಿ ಒಂದು ರಾತ್ರಿಯಲ್ಲಿ ನಡೆವ ನಾಟಕ. ೧೨ನೇ ಶತಮಾನದಲ್ಲಿ ನಡೆದ ಬಸವಣ್ಣನ ನೇತೃತ್ವದ ಚಳುವಳಿಯನ್ನು ಹೊಸಕಣ್ಣಿನಿಂದ ನೋಡುವ ಈ ನಾಟಕ ಬಸವಣ್ಣ ಮತ್ತು ಬಿಜ್ಜಳನ ಸಂಘರ್ಷಗಳನ್ನು ಸಾಮಾನ್ಯ ಜನವರ್ಗದ ಕಣ್ಣಿನಿಂದ ನೋಡುತ್ತದೆ. ಲಕ್ಷಾಂತರ ಬೆಲೆಬಾಳುವ ಮುತ್ತಿನಸರವನ್ನು ಅಸಹ್ಯದಂತೆ ಕಾಣುವ ಕಾಶವ್ವ, ಮುದುಕಪ್ಪ, ಸೂಳೆಸಾವಂತ್ರಿ ಒಂದಡೆಯಾದರೆ, ನಿಮ್ಮ ಕನಸಿನಲ್ಲಿ ನನಗೂ ಜಾಗ ಸಿಗುತ್ತದೆಂದು ಕಾದೆ, ಅಂಗೈಯಗಲ ಜಾಗವೂ ಸಿಗಲಿಲ್ಲ ಎನ್ನುವ ಬಿಜ್ಜಳ ಇನ್ನೊಂದಡೆ. '' ನೀವಿರುವ ಜಾಗವನ್ನು ಕೂಡಲಸಂಗಮ ಮಾಡಲು ಹೊರೆಟೆವು ಆದರೆ ನೀವು ಕತ್ತಲೆಗೆ ಒಯ್ಯುವ ಹಳೆಯ ದಾರಿಗಳಲ್ಲೇ ನಡೆಯ ಬಯಸಿದಿರಿ '' ಎನ್ನುವ ಬಸವಣ್ಣ. ಹೀಗೆ ಈ ನಾಟಕ ಕಲ್ಯಾಣದ ದುರಂತವನ್ನು ಒಂದು ರಾತ್ರಿಯಲ್ಲಿ ನಡೆವ ಘಟನೆಗಳ ಮೂಲಕ ತೆರೆದಿಡುತ್ತ ಹೋಗುತ್ತದೆ. ಡಾ.ಚಂದ್ರಶೇಖರ ಕಂಬಾರರ ಕಾವ್ಯಮಯ ಭಾಷೆಯ ಸೊಬಗು, ವಾಸ್ತವವಾಗುತ್ತಲೇ ಅತಿವಾಸ್ತವಕ್ಕೆ ಚಿಮ್ಮುವ ರೂಪಕಗಳ ಕಥಾನಕ ಇರುವ ಈ ನಾಟಕ ಕನ್ನಡದ ಮಹತ್ವದ ನಾಟಕಗಳ ಸಾಲಿಗೆ ನಿಲ್ಲಬಲ್ಲದು. ಮೈಸೂರಿನ ನಿರಂತರ ಫೌಂಡೇಶನ್ ಈ ವರ್ಷದ ಹೊಸ ನಾಟಕವಾಗಿ ಶಿವರಾತ್ರಿಯನ್ನು ಚಿದಂಬರರಾವ್ ಜಂಬೆಯವರ ನಿರ್ದೇಶನದಲ್ಲಿ ಪ್ರಯೋಗಕ್ಕೆ ಸಿದ್ದಪಡಿಸಿದೆ.

Shivarathri

Shivarathri, a play by Dr.Chandrashekhara Kambara, which tells the story of Kalyana stands different than any other play in its perspective and background. Ranging from vital characters, protagonists, antagonists, punters of Kalayana's revolution, a blue print of the entire universe gets created at a brothel. Happening in this specific frame, the entire conflicts and turmoil have brought a great depth to the characters and events of the play. All the characters along with Bijjala and Basvanna leave their profound impressions on the stage even amid such a great turmoil.

In this work of art, history becomes a myth and the myth reaches the heights of an aesthetic experience. 
More details

 

Tea House

Tea house is a famous Chinese play by Lao She. It mirrors the anxiety over degeneration of human values. The play has been translated into many other languages and has been performed all over the world.

Our objective was to translate and stage this significant play. It spans over three different time periods, sensitively documenting the tragedy of human being. It talks about the ever changing time, environment and situations and changes they bring on humanity. It is about how the small desires and ambitions of a person float away in the stream of time; the tragedy of it comes forth in a sensitive yet sharp manner.

Tea house is as good as 'Cherry orchard' of Anton Chekov. Like a trampled petal of a flower, the way modern China's history has been trampled within the tight walls and is under neo-imperialism, hits us directly. India, which is forgetting ethics and is standing at the threshold of modern civilization, is not much different from China. This play mirrors the way human wishes being trampled all over the world.

More details

ಜುಂಜಪ್ಪ- ಮಹಾಕಾವ್ಯ ವಾಚನಾಭಿನಯ

ಭಾರತೀಯ ಸಂಸ್ಕೃತಿಯಲ್ಲಿ ಜನಪದ ಮಹಾಕಾವ್ಯಗಳಿಗೆ ಮಹತ್ವದ ಸ್ಥಾನವಿದೆ. ನೂರಾರು ವರ್ಷಗಳಿಂದ ಜನರ ಎದೆಯ ದನಿಗಳಂತೆ, ಜನಸಾಮಾನ್ಯರ ನೋವು, ನಲಿವು, ಬದುಕು, ಸಂಸ್ಕೃತಿಗಳ ಅಭಿವ್ಯಕ್ತಿಯಂತೆ ಇವು ಬಾಯಿಂದ ಬಾಯಿಗೆ ಹರಿದು ಬಂದಿದೆ. ಹಾಗಾಗಿಯೇ ಇವು ಮಹತ್ವದ ಸ್ಥಾನ ಪಡೆದಿವೆ. ಜನಪದ ಮೌಖಿಕ ಮಹಾಕಾವ್ಯಗಳೆಂದರೆ ಅವು ಸಾಮಾಜಿಕ ಪಲ್ಲಟಗಳ ಸಾರ್ವಕಾಲಿಕ ದಾಖಲೆಗಳು. ಚರಿತ್ರೆಯ ನೇರ ಮುಖಾಮುಖಿಗಳು. ಇಲ್ಲಿ ಕಾವ್ಯ ರಚಿಸುವವರು, ಕಾವ್ಯ ಹಾಡುವವರು, ಕಾವ್ಯವನ್ನು ಅಭಿನಯಿಸುವವರು ಎಲ್ಲರೂ ಒಬ್ಬರೇ ಆಗಿದ್ದಾರೆ. ಹಾಗಾಗಿ ಇದು ಚರಿತ್ರೆಯ ಅನೇಕ ಕಾಲಘಟ್ಟಗಳಲ್ಲಿ ನಡೆದ ವಿದ್ಯಾಮಾನಗಳ, ಸಂಘರ್ಷಗಳ ನೇರವಾದ ದಾಖಲೆ. ಮಾಡುವವನೊಬ್ಬ ದಾಖಲಿಸಿದವನೊಬ್ಬ ಎನ್ನುವ ಇಬ್ಬಂದಿತನ ಈ ಮಹಾಕಾವ್ಯಗಳಿಗೆ ಇಲ್ಲ ಇದು ಸಂಸ್ಕೃತಿಯ ದಾಖಲೀಕರಣದ ದೃಷ್ಟಿಯಿಂದ ಬಹು ಮುಖ್ಯ ಅಂಶ. ನಮ್ಮಲ್ಲಿ ಸಂಸ್ಕೃತಿಯ ದಾಖಲೀಕರಣ ಎರಡು ವಿಭಿನ್ನವಾದ, ವಿರುದ್ದವಾದ ಆದರೆ ಸಮಾನಾಂತರವಾದ ನೆಲೆಗಳಲ್ಲಿ ನಡೆದಿದೆ. ಒಂದು ಶಿಷ್ಟ ಮಹಾಕಾವ್ಯಗಳ ಪರಂಪರೆ. ಇನ್ನೊಂದು ಬುಡಕಟ್ಟು ಅಥವಾ ಜನಪದ ಮಹಾಕಾವ್ಯಗಳ ಪರಂಪರೆ. ಶಿಷ್ಟ ಮಹಾಕಾವ್ಯಗಳೂ, ಏಕಮುಖೀ ಸಂಸ್ಕೃತಿಯ ಪ್ರತೀಕಗಳು. ಜನಪದ ಮಹಾಕಾವ್ಯಗಳಾದರೋ ಬಹುಮುಖೀ ಸಂಸ್ಕೃತಿಯ ಪ್ರಖರ ಪ್ರತೀಕಗಳು. ಯಾವುದೇ ದೇಶವೊಂದರ ಸಾಂಸ್ಕೃತಿ ಚರಿತ್ರೆಯನ್ನು ಗಮನಿಸಿದರೆ ಬಹುಮುಖೀ ಸಂಸ್ಕೃತಿಯ ಧಾರೆಯೇ ಪ್ರಧಾನವಾಗಿ ಕಾಣುತ್ತದೆ. ಜನರನ್ನು ಅವರವರ ಸಮೂಹ, ಜನಾಂಗಗಳ ಆಚರಣೆಗಳ ವಿಶಿಷ್ಟತೆಗೆಳೆಂದರೆ ಗುರುತಿಸುತ್ತಾ, ಎಲ್ಲವನ್ನೂ ಒಗ್ಗೂಡಿಸುವ ಏಕ ಸಂಸ್ಕೃತಿಯ ಬಂಧದಿಂದ ಬಿಗಿದಿಡುವ ಬಹುಮುಖೀ ಸಂಸ್ಕೃತಿ, ಜನಪರಂಪರೆಯ ಇತಿಹಾಸದ ಪ್ರಮುಖ ಅಂಶವಾಗಿದೆ. ಇವುಗಳೂ ವ್ಯಕ್ತಿ ವಿಶಿಷ್ಟತೆ ಹಾಗೂ ಸಮುದಾಯ ವಿಶಿಷ್ಟತೆಗಳ ಅಭಿವ್ಯಕ್ತಿಯೂ ಹೌದು. ಕೈಮರವೂ ಹೌದು. ದಾಖಲೆಯೂ ಹೌದು. ಈ ಕಾರಣಗಳಿಂದಾಗಿ ಜನಪದ ಅಥವಾ ಬುಡಕಟ್ಟು ಮಹಾಕಾವ್ಯಗಳು ಭಾರತದ ಸಂಸ್ಕೃತಿಯ ಚರಿತ್ರೆಯ ಮುಖ್ಯವಾದ ಅಗತ್ಯಗಳಾಗಿವೆ. ಈ ಹಿನ್ನೆಲೆಯಲ್ಲಿ ಇಂತಹ ಜನಪದ ಮಹಾಕಾವ್ಯವೊಂದರ ಅಧ್ಯಯನ ಹಾಗೂ ರಂಗಸಾಧ್ಯತೆಯ ಪ್ರಯೋಗವನ್ನು ಮಾಡುವುದು ನಮ್ಮ ಅದ್ಯತೆಯಾಗಿದೆ. ಮಂಟೇಸ್ವಾಮಿ, ಮಲೆ ಮಹದೇಶ್ವರ ಜನಪದ ಕಾವ್ಯಗಳಂತೆ ಜುಂಜಪ್ಪ ಮಹಾ ಕಾವ್ಯವನ್ನ ರಂಗಕ್ಕೆ ತರುವುದು ನಮ್ಮ ಉದ್ದೇಶ.

Junjappa - A Folk Epic

Folk epics have a great significance in India. Since time immemorial, they have been spreading orally from generations to generations reflecting the pain, joy and culture of human race. Folk epics are in a way the result of direct encounter with history and are universal documents of the plight of human race. Hence, they are the true historical documents of many events and conflicts in different ages. In our cultural arena the idea of documentation has occurred in two different and contradictory perceptions, but they seem to be at a balanced state. One is the tradition of written epics and the other is of folk or oral epics. A mere glance at any nation’s cultural history tells us that its vibrancy and existence lies in its multicultural tradition significantly represented by folk epics. This fact is very much evident in the Indian cultural history.

And our attempt is to adapt one such folk epic Junjappa to the stage with all its vibrancy and depth.

More details

Bhoma

In countries like India, the galloping pace of globalization has lead to the gradual disappearance of a large number of farmers. Bhoma is a play which unveils their tragic scenario in vivid details. Bhoma becomes a record of our negligence and loss of agricultural based lifestyle. This play is dedicated to those destitute farmers who committed suicides in this country.

Ide... Itthu... Iruttade

It is not new for us to equate Mother and Mother Earth. The anxiety around the continued exploitation of Earth is always there. Our system and society’s failure to tackle these exploiters makes us more anxious and this fear seems to be never ending. It is high time that we take an initiative to tackle them and this play is one such attempt to address the need. This play was staged during one of our theatre workshops for college students. It evolved with an adaptation of about Mother and Mother Earth onto the stage.

The poems adapted in this play are those written by poets like Bendre, Kuvempu, Lankesh, K V Thirumalesh, Aarif Raaja and participants of the workshop.

ಸಹಜರಂಗ - ರಂಗ ತರಬೇತಿ ಶಿಬಿರ

ಕಣ್ಣಿಗೊಂದು ಕನಸು...

ಬದಲಾಗುತ್ತಿರುವ ಭಾರತದ ಸನ್ನಿವೇಶದಲ್ಲಿ, ಸಾಂಸ್ಕೃತಿಕ ಅರ್ಥ ಹಾಗೂ ವಿವರಣೆಗಳು ವೇಗವಾಗಿ ಪಲ್ಲಟಗೊಳ್ಳುತ್ತಿವೆ. ಜಾಗತಿಕ ಬದುಕು ಭಾರತದಂತಹ ಬಹುಮುಖಿ ಸಾಂಸ್ಕೃತಿಕ ವ್ಯಕ್ತಿತ್ವದ ಮೇಲೆ ಅಪಾರವಾದ ಒತ್ತಡ ಹೇರುತ್ತಿದೆ. ಈ ಒತ್ತಡ ನಿಜವಾಗಿಯೂ ಇರುವುದು ಭಾರತದ ಯುವಜನಾಂಗದ ಮೇಲೆಯೇ. ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗ್ರಹಿಸಲಾಗದೇ, ಜಾಗತಿಕ ಒತ್ತಡಕ್ಕೆ ಸಿಕ್ಕಿಕೊಂಡಿರುವ ಯುವ ಸಮೂಹ ಸ್ಪರ್ಧೆಗೆ ನಿಂತವರಂತೆ ಅಸಹಜ ವೇಗದಲ್ಲಿ ಸಾಗುತ್ತಿದಾರೆ. ಈ ಅಸಹಜ ವೇಗ, ನಮ್ಮ ಸುತ್ತಲಿನ ಸತ್ವಯುತವಾದ ಸಾಂಸ್ಕೃತಿಕ, ಸಾಮಾಜಿಕ ಪರಿಸರವನ್ನು ಅವರ ಕಣ್ಣಿಂದ ದೂರಮಾಡಿ, ಅಸಹಜವಾದ, ಉದ್ದೇಶರಹಿತವಾದ, ವ್ಯಕ್ತಿಕೇಂದ್ರಿತ ಬದುಕಿನೆಡೆಗೆ ತಳ್ಳುತ್ತಿದೆ.

ಇಡೀ ಭಾರತವೇ ಇಂಥ ಸಾಮುದಾಯಿಕ ಪ್ರಜ್ಞೆ ಮತ್ತು ಪರಿಸರದಿಂದ ದೂರವಾಗುತ್ತಿರುವ ಇಂಥ ಸಂದರ್ಭದಲ್ಲಿ ಮತ್ತೆ ನಮ್ಮ ಸುತ್ತಲಿನ ಸಹಜ ಪರಿಸರವನ್ನು ಮತ್ತು ಪ್ರಜ್ಞೆಯನ್ನು ತೆರೆದಿಡುವ ಪ್ರಯತ್ನವೇ ಸಹಜರಂಗ ರಂಗಶಿಬಿರದ ಆಶಯ. ರಂಗ ಮಾಧ್ಯಮದ ಮೂಲಕ ಸಾಂಸ್ಕೃತಿಕ ಚರ್ಚೆ, ಸಂವಾದಗಳ ಮೂಲಕ, ಪರಿಸರ ಪ್ರಜ್ಞೆಯನ್ನು ರೂಢಿಸಿಕೊಳ್ಳುವುದರ ಮೂಲಕ ಮತ್ತೆ ಸಹಜತೆಯೆಡೆಗೆ ನಾವೆಲ್ಲ ಮರಳುವಂತಹ ಪರಿಸರವನ್ನು ನಿರ್ಮಿಸಿಕೊಳ್ಳಲು, ಸಾಂಸ್ಕೃತಿಕ ಮುಖಾಮುಖಿಯೊಂದನ್ನು ರೂಪಿಸುವುದು ರಂಗಶಿಬಿರದ ಉದ್ದೇಶ.

ನಮ್ಮತನ, ನಮ್ಮ ಜಾನಪದ, ಬದುಕು, ನಾಟಕ, ಕಾವ್ಯ, ನೆಲ, ಜನಗಳೆಂಬ ಮೌಲ್ಯಗಳನ್ನು, ಗೌರವಿಸುವ, ಗ್ರಹಿಸುವ ವಿಶಾಲವಾದ ಮನಸ್ಸೊಂದರ ಸೃಷ್ಟಿ ಇಂತಹ ಶಿಬಿರಗಳಿಂದ ಸಾಧ್ಯ. ಸಹಜರಂಗ ಇಂತಹ ಒಂದು ಪ್ರಯತ್ನ, ಧರ್ಮ, ಜಾತಿ ಪ್ರದೇಶಗಳ ಎಲ್ಲೆಗಳನ್ನು ಮೀರಿ, ಸಾಮುದಾಯಿಕ ಬದುಕಿನ ನಿಜದ ನೆಲೆಗಳನ್ನು ಹುಡುಕುವ ಒಂದು ಸಾಂಸ್ಕೃತಿಕ ಪ್ರಯತ್ನ.

ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲಿರುವ ಈ ಶಿಬಿರದಲ್ಲಿ ಕಲೆ, ರಂಗಭೂಮಿ, ಜಾನಪದ, ಸಹಜ ಕೃಷಿ, ನೆಲ, ಜಲಗಳಂತಹ ವಿಷಯಗಳ ಚರ್ಚೆ, ಸಂವಾದ, ತರಬೇತಿಗಳು ಇರುತ್ತವೆ. ಶಿಬಿರದ ಅಂಗವಾಗಿ ಶಿಬಿರಾರ್ಥಿಗಳೇ ಪ್ರಯೋಗಿಸುವ ಹೊಸ ನಾಟಕವೂ ಪ್ರದರ್ಶನಗೊಳ್ಳಲಿದೆ. ನಾಡಿನ ಹೆಸರಾಂತ ರಂಗತಜ್ಞರು, ವಿಷಯ ಪರಿಣಿತರು, ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

Sahajaranga - Theatre Workshop

A Dream for an Eye...

The concept of globalization is creating a pressure on a pluralistic nation like India. And youth are the major carriers of this. They seem to be at an abnormal run and thus failing to sense and recognize the richness of our cultural and social roots. It is in a way pushing them to a self-centred attitude.

In this changing scenario, the meaning of culture is getting altered rapidly.

While the youth of this nation are losing their sense of belonging to the culture and society, Sahajaranga, a theatre workshop is an attempt to give them that sense of belonging.

Designed for college students, this workshop helps them to know our culture, literature, folklore, ethics and principles while also learning the art of theatre. In association with famous theatre experts and intellectuals, the students are sensitized about many social issues through theatre as a medium.

A play dwelling upon a social issue will be staged by the participants at the end of the workshop.

More Details

 

Street Plays

1970s – an era which witnessed revolutionary changes in the social, economical and political arena of India. All the media of expressions set stage for an expression of these revolutions. Street plays were the most adaptable effective and vibrant among all these media. They served as voices of these social causes. They were no longer an extension of art but the weapons against exploitations.

Niranthara ,since its emergence has actively associated itself with this medium, to address many social issues.

Share / Scan the above QR code for subscription to our Newsletter

 

Contact Us

 

Contact Form

Information

Phone: +91-821-2544990
Moblie: +91 9449271983
email-id: This email address is being protected from spambots. You need JavaScript enabled to view it.
Address

Niranthara Foundation,
Infront of TTL College,
Kantharaje Urs road,
Saraswathipuram, Mysuru (Mysore),-570009 Karnataka, India

Locate Us